ಕೋವಿಡ್ - 19 ಮಹಾಮಾರಿ ವಕ್ಕರಿಸಿದ್ದ ಸಮಯದಲ್ಲಿ, ಏಪ್ರಿಲ್ 28, 2020ರಂದು ಜನರಿಗೆ ಡಾ. ಯಂಡಮೂರಿ ವೀರೇಂದ್ರನಾಥ್ ಕಳಕಳಿಯ ಸಲಹೆ:
ಕೋವಿಡ್ - 19 ಮಹಾಮಾರಿ ವಕ್ಕರಿಸಿದ್ದ ಸಮಯದಲ್ಲಿ, ಏಪ್ರಿಲ್ 28, 2020ರಂದು ಜನರಿಗೆ ಡಾ. ಯಂಡಮೂರಿ ವೀರೇಂದ್ರನಾಥ್ ಕಳಕಳಿಯ ಸಲಹೆ:
"ಭವಿಷ್ಯತ್ತಿನಲ್ಲಿ ಅಸೆಂಬ್ಲಿಗಳೂ, ಆಫೀಸುಗಳೂ, ಸಿನಿಮಾ ಹಾಲ್ಗಳೂ ಇರುವುದಿಲ್ಲ. ಪೆಟ್ರೋಲ್ ರೇಷನ್ ಆಗುವುದರಿಂದ ಸೂಪರ್
ಮಾರ್ಕೆಟ್ಟುಗಳೂ, ಹಾಲ್ಗಳೂ ಹೋಗಿ ಎಲ್ಲವೂ ಆನ್ ಲೈನ್ ಮಾರಾಟಗಳೇ ಇರುತ್ತವೆ" ಎಂದು ಮೂವತ್ತು ವರ್ಷಗಳ ಹಿಂದೆ ಬರೆದಾಗ ಅವೆಲ್ಲವೂ ಅಭೂತಪೂರ್ವ ಕಲ್ಪನೆಗಳೆಂದು ಕೆಲವರು ಟೀಕಿಸಿದ್ದರು. ನನ್ನ ಕಾದಂಬರಿಯ ಹೆಸರಾವುದೋ ನೆನಪಿಲ್ಲ.
ಆದರೆ ಎರಡು ದಿನಗಳ ಹಿಂದೆ...
ಉಗಾಂಡಾ ದೇಶದ ಅಧ್ಯಕ್ಷ ಮಾಡಿದ ಭಾಷಣ ಇದು. ಹಬ್ಬದ ಹೆಸರು ಹೇಳಿ ಬೀದಿಗಳಲ್ಲಿ ಕೆಲಸವಿಲ್ಲದೇ ತಿರುಗಾಡುತ್ತಿದ್ದ ತನ್ನ ಪ್ರಜೆಗಳನ್ನು ಉದ್ದೇಶಿಸಿ ರಾಷ್ಟ್ರಾಧ್ಯಕ್ಷ 'ಮುಸೆವನೀ' ಮಾಡಿದ ಸಾರಾಂಶಕ್ಕೆ ಸ್ವೇಚ್ಛಾನುವಾದ ಓದಿ:
"ಭಗವಂತನಿಗೆ ಬಹಳ ಕೆಲಸಗಳಿವೆ.
ಪ್ರಪಂಚವನ್ನೆಲ್ಲಾ ಅವನೇ ನೋಡಿಕೊಳ್ಳಬೇಕು.
ನಿಮ್ಮಂತಹ ರೆಕ್ಲೆಸ್ ಉಗಾಂಡಾ
ಇಡಿಯೆಟ್ಟುಗಳಿಗಾಗಿ ವ್ಯಯಿಸುವಷ್ಟು ಸಮಯ ಅವನಿಗಿಲ್ಲ. ಕುತ್ತಿಗೆಗೆ ಹಗ್ಗ ಹಾಕಿ 'ನನ್ನ ಜೊತೆಗಿರುವೆಯಂತೆ ಬಾ' ಎಂದು
ಕರೆದೊಯ್ಯುತ್ತಾನೆ. ನಿಮ್ಮ ಇಷ್ಟ ಬಂದಂತೆ
ಬದುಕುವಿರಾ? ಬದುಕುತ್ತಿದ್ದರೆ ಸಾಕು
ಅಂದುಕೊಳ್ಳುವಿರಾ?... ನಿಮ್ಮಿಷ್ಟ. ಯುದ್ಧ ಕಾಲದಲ್ಲಿ ಯಾರೂ ಯಾರನ್ನೂ ಮನೆಯೊಳಗೇ ಇರೆಂದು ಕೇಳುವುದಿಲ್ಲ. ನೀವೇ ದಿನಗಟ್ಟಲೆ ಫ್ಲ್ಯಾಟ್ಸ್ ಕೆಳಗೆ ಬೆದರುತ್ತಾ ಹೆದರುತ್ತಾ ಬಚ್ಚಿಟ್ಟುಕೊಳ್ಳುವಿರಿ.
ಪೀಜ್ಜಾಗಳಿಗಾಗಿ, ಸುಗಂಧ ದ್ರವ್ಯಗಳಿಗಾಗಿ ರಸ್ತೆ ಮೇಲೆ ಬರುವುದಿಲ್ಲ. ರೊಟ್ಟಿ ಸಿಕ್ಕಿದರೆ ಸಾಕು ಎಂದುಕೊಳ್ಳುತ್ತೀರಿ. ಮಧ್ಯರಾತ್ರಿ ದೂರದಲ್ಲಿ ಕೇಳಿಸುವ ಬಾಂಬುಗಳ ಶಬ್ದವನ್ನು ಕೇಳಿಸಿಕೊಳ್ಳುತ್ತಾ ನಿದ್ರೆಗೆ ದೂರವಾದ ನೀವು, ಮರುದಿನ ಬೆಳಗ್ಗೆ ಸೂರ್ಯೋದಯವನ್ನು ನೋಡಿ, ಆ ರಾತ್ರಿ ಬದುಕಿದ್ದಕ್ಕೆ ಭಗವಂತನಿಗೆ ಧನ್ಯವಾದಗಳನ್ನು ಅರ್ಪಿಸುತ್ತೀರೇ ಹೊರತು, ನಿದ್ರೆಯಿಲ್ಲವೆಂದು ದೂರುವುದಿಲ್ಲ. ಮಕ್ಕಳಿಗೆ ಕಾಲೇಜು ಹೋಗುವುದೆಂದು ನೊಂದುಕೊಳ್ಳುವುದಿಲ್ಲ. ಸೈನ್ಯದಲ್ಲಿ ಸೇರಿಸಲು ಸರ್ಕಾರ ನಿಮ್ಮ ಮಕ್ಕಳನ್ನು ಬಲವಂತವಾಗಿ ಎಳೆದೊಯ್ಯಲಿಲ್ಲವೆಂದು ಸಂತೋಷಿಸುತ್ತೀರಿ.
ಕಾಲುಗಳು, ಕೈಗಳು ಕತ್ತರಿಸಲ್ಪಟ್ಟ ಜನ ಅರ್ಧರಾತ್ರಿಯ ಆರ್ತನಾದಗಳ ನಡುವೆ… ಭೂಕಂಪಕ್ಕೆ ಕುಸಿದುಹೋದ ನಿಮ್ಮ ಭವನದ ಮುಂದೆ … ಮೂಳೆಯನ್ನು ಕೊರೆಯುವ ಛಳಿಯಲ್ಲಿ ಮಕ್ಕಳನ್ನಿಟ್ಟುಕೊಂಡು ರಾತ್ರಿಯೆಲ್ಲಾ ಕುಳಿತುಕೊಳ್ಳುವ ಸ್ಥಿತಿ ಬರದಿದ್ದುದಕ್ಕೆ ಆನಂದ ಪಡಿ. ಮರದ ಕೊಂಬೆಗಳನ್ನು ಹಿಡಿದು ಜೋತಾಡುತ್ತಾ ವೇಗವಾಗಿ ನುಗ್ಗಿ ಬರುತ್ತಿರುವ ನೀರಿನ ಪ್ರವಾಹದಲ್ಲಿ ತೇಲಿ ಬರುವ ಹಾವುಗಳು ಕಾಲಿಗೆ ಸುತ್ತಿಕೊಳ್ಳುವುವೇನೋ ಎಂದು ಭಯಪಡುವಂತಹ ಭಯಂಕರವಾದ ಸ್ಥಿತಿ ಅಲ್ಲ ಇದು. ಎರಡು ದಿನಗಳಿಂದ ಆಹಾರವಿಲ್ಲದೇ ಅಳುವ ಎಳೆಕಂದಮ್ಮಗಳೊಂದಿಗೆ ಮನೆಯ ತಾರಸಿಯ ಮೇಲೆ ನಿಂತು, ಹೆಲಿಕಾಪ್ಟರ್ನಿಂದ ಎಸೆಯಲ್ಪಡುವ ಅನ್ನದ ಪೊಟ್ಟಣ ನಿಮ್ಮ ಮನೆಯ ಮೇಲೇ ಬೀಳಲೆಂದು, ಆಕಾಶದತ್ತ ಆಸೆಯಿಂದ ನೋಡಬೇಕಾದ ದುರವಸ್ಥೆ ಇಲ್ಲ. ಅದಕ್ಕೆ ಸಂತೋಷಪಡಿ."
ʼನಾವು ಇದಕ್ಕೆ ಅತೀತರುʼ ಎಂದು ತಿರುಗಾಡುತ್ತಿರುವ ನನ್ನ ದೇಶದ ಕೆಲವು ಪ್ರಜೆಗಳೇ… ನಿಮ್ಮನ್ನು ಬಿಟ್ಟು ಇಡೀ ಪ್ರಪಂಚ ಶತ್ರುಗಳೊಂದಿಗೆ ಯುದ್ಧ ಮಾಡುತ್ತಿದೆ. ಈ ಯುದ್ಧದಲ್ಲಿ ಬಾಂಬುಗಳಿಲ್ಲ, ಸೈನಿಕರಿಲ್ಲ. ಸರಹದ್ದುಗಳಿಲ್ಲ. ಶಾಂತಿ ಒಪ್ಪಂದಗಳಿಲ್ಲ. ದಯಾದಾಕ್ಷಿಣ್ಯಗಳಿಲ್ಲ. ಮತ, ದೇಶ, ಗಂಡು, ಹೆಣ್ಣು, ಎಳೆಯ ಕಂದಮ್ಮಗಳು, ವೃದ್ಧರು ಎಂಬ ವ್ಯತ್ಯಾಸವಿಲ್ಲ. ಶತ್ರುವಿನ ಗುರಿಯೊಂದೇ. ಪ್ರಪಂಚವನ್ನು ಸ್ಮಶಾನ ಮಾಡುವುದು..! ಅದರ ಹೆಸರೇ ಕೋವಿಡ್-19.
ಆದರೆ ನಮ್ಮ ಶತ್ರು ನಾವು ಅಂದುಕೊಂಡಷ್ಟು ಬಲವಾದುದ್ದಲ್ಲ. ಅದಕ್ಕೆ ಒಂದು ದೌರ್ಬಲ್ಯವಿದೆ. ಎದುರಿಸಿದರೆ ವಿಜೃಂಭಿಸುತ್ತದೆ. ದೂರವಾಗಿದ್ದರೆ ಕರಗಿ ಹೋಗುತ್ತದೆ. ಬಹಳ ಸುಲಭವಾಗಿ ಸೋಲಿಸಬಹುದು. ಬೇಕಾಗಿರುವುದು ಶಿಸ್ತು.
ವಾಸ್ತವವನ್ನು ಅರ್ಥ ಮಾಡಿಕೊಳ್ಳಿ. ಇನ್ನೊಂದು ವರ್ಷದವರೆಗೂ ವ್ಯಾಕ್ಸಿನ್ ಕಂಡುಹಿಡಿಯಲ್ಪಡುವುದಿಲ್ಲ. ವ್ಯಾಕ್ಸಿನ್ ಕಂಡುಕೊಳ್ಳುವವರೆಗೂ ಯಾವ ದೇಶವೂ ಕೂಡ ಪರದೇಶದವನನ್ನು ತಮ್ಮ ದೇಶಕ್ಕೆ ಬರಲು ಒಪ್ಪಿಕೊಳ್ಳುವುದಿಲ್ಲ. ವಿದೇಶದಲ್ಲಿರುವವರು ಒಮ್ಮೆ ನಮ್ಮ ದೇಶಕ್ಕೆ ಬಂದರೆ ಮರಳಿ ಹೋಗುವುದು ಕೂಡ ಕಷ್ಟವೇ. 2021 ಜೂನ್ ವರೆಗೂ ಪರಿಸ್ಥಿತಿ ಹೀಗೇ ಇರುತ್ತದೆ. ಹಡಗು, ವಿಮಾನಯಾನಗಳು ಸಾಧ್ಯವಿಲ್ಲ. ಪಕ್ಕದ ಸೀಟು ಖಾಲಿ ಇದ್ದರೆ ಹೊರತು ವಿಮಾನಯಾನ ಸಾಧ್ಯವಿಲ್ಲ. ಹಾಗೆ ಮಾಡಿದರೆ ಕಮರ್ಷಿಯಲ್ ಆಗಿ ಅವು ಸಕ್ಸೆಸ್ ಆಗವು. ಆದ್ದರಿಂದ ಅವುಗಳ ಬಗ್ಗೆ ಮರೆತುಬಿಡಿ. ವಿದೇಶಗಳಲ್ಲಿ ಇರುವ ನಿಮ್ಮ ಮಕ್ಕಳು, ಬಂಧುಗಳು ಬಹಳ ಕಾಲ ನಿಮಗೆ ಕಾಣಿಸದೇ ಹೋಗಬಹುದು. ಲಾಕ್ ಡೌನ್ ತೆಗೆದೊಡನೆ ಆಲ್ಪ್ಸ್ ಹಿಮಪರ್ವತಗಳ ಮೇಲೆ ಸ್ಕೇಟಿಂಗ್ ಬಗ್ಗೆ ಮೊನ್ನೆ ನನ್ನ ಸ್ನೇಹಿತ ಮಾತಾಡಿದ. ನಗು ಬಂದಿತು. ಹೊಟೇಲ್ಸ್, ಮಾಲ್ಸ್, ಸಿನಿಮಾ ಇವುಗಳ ಬಗ್ಗೆ ಮರೆತುಬಿಡಿ. ಪುಷ್ಕರ ಸ್ನಾನಗಳು, ಪುಣ್ಯಕ್ಷೇತ್ರ ದರ್ಶನಗಳು ಇರುವುದಿಲ್ಲ. ಭಗವಂತನನ್ನು ಎಲ್ಲಿಂದ ಪ್ರಾರ್ಥಿಸಿದರೂ ಒಂದೇ ಎಂದು ಅರಿತುಕೊಳ್ಳಿ. ಒಂದು ಒಳ್ಳೆಯ ಪರಿಣಾಮಕ್ಕಾಗಿ ಈ ಸಮಸ್ಯೆಯನ್ನು ಆಧಾರಭೂತವಾಗಿ ಮಾಡಿಕೊಳ್ಳೋಣ. ಆಲ್ ದಿ ಬೆಸ್ಟ್…”
-ಯಂಡಮೂರಿ ವೀರೇಂದ್ರನಾಥ್